ತಿಮ್ಮಣ್ಣ ಕವಿ: -

	ಸು. 1510, ಕನ್ನಡ ಭಾರತದ ಉತ್ತರ ಭಾಗ ಎಂದರೆ ಶಾಂತಿಪರ್ವ ಮೊದಲುಗೊಂಡು 8 ಪರ್ವಗಳನ್ನು ಬರೆದ ಕವಿ ಬ್ರಾಹ್ಮಣ. ಭಾರಧ್ವಾಜ ಗೋತ್ರೋದ್ಭವನೂ ಪದವಾಕ್ಯಪ್ರಮಾಣಜ್ಞನೂ ಆದ ಭಾನು ಕವಿಯ ಮಗ. ಕನ್ನಡ ರಾಜ್ಯರಮಾರಮಣ ನೆನಿಸಿದ ತುಳು ವಂಶತಿಳಕನಾದ, ವಿಜಯನಗರದ ವಿಖ್ಯಾತ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಆಸ್ಥಾನಕವಿ. 

	ಬಹುಶಃ ಈತ ಬರೆದದ್ದು ಒಂದೇ ಒಂದು ಗ್ರಂಥವಾದ - "ಕರ್ಣಾಟ ಕೃಷ್ಣ ರಾಯಭಾರತ ಕಥಾಮಂಜರಿಯಲ್ಲಿ" ಒಟ್ಟು 40 ಸಂಧಿಗಳಿದ್ದು, 3,736 ಪದ್ಯಗಳಿವೆ. ಬಿರುದು: -"ಕರ್ಣಾಟಕ ಕವಿಕುಲ ಸಾರ್ವಭೌಮ".

	ಪೀಠಿಕಾ ಸಂಧಿಯಲ್ಲಿ ಕವಿ ಶ್ರೀ ವೆಂಕಟೇಶ, ಪಂಪಾ, ವಿರೂಪಾಕ್ಷ, ಬ್ರಹ್ಮ, ಲಕ್ಷ್ಮಿ, ಗಣಪತಿ, ಸರಸ್ವತಿ ಇವರುಗಳನ್ನು ಕ್ರಮವಾಗಿ ಪ್ರಾರ್ಥಿಸಿ ಅನಂತರ ತನ್ನ ಆಶ್ರಯದಾತನಾದ ಶ್ರೀ ಕೃಷ್ಣದೇವರಾಯನ ವಂಶಾವಳಿಯನ್ನು ಸುಮಾರು 17 ಪದ್ಯಗಳಲ್ಲಿ ತಿಳಿಸಿದ್ದಾನೆ. 

	ಒಮ್ಮೆ ಶ್ರೀ ಕೃಷ್ಣದೇವರಾಯ ತಿಮ್ಮಣ್ಣ ಕವಿಯನ್ನು ಕರೆದು ವಿನೂತನ ವಸ್ತ್ರಭೂಷಣಗಳನ್ನಿತ್ತು ಮನ್ನಿಸಿ` ಲೇಸೆನಿಸಿ ಮೊದಲ ಕುಮಾರವ್ಯಾಸ ದಶ ಪರ್ವಗಳ ಹೇಳಿದ. ಭಾಸುರವಿದೆಂದೆನಿಸಿ ಭಾರತದುಳಿದ ಪರ್ವಗಳ ನೀಸಕಲ ಜನ ಮೆಚ್ಚುವಂತೆ ವಿಲ್ಲಾಸದಲಿ ಪೇಳು.. ಸುರನದಿಯ ಯಮನಾ ತರಂಗಿಣಿ ಬೆರಸಿ ಹರಿವಂದದಲ್ಲಿ ಕವಿಕುಂಜರ ಕುಮಾರವ್ಯಾಸನುರುವಾಗ್‍ಲಹರಿಯೊಡನೀಗ ಸರಿಯೆನಿಸಿ ಕೂಡಿಸೈ ಸುರುಚಿರ ಭವತ್ ಕವಿತಾ ಪ್ರವಾಹವ, ಪರಮಪೂರ್ಣ ನಿಧಾನವಹುದು ಎಂದು ನಿರೂಪಿಸಿದನಂತೆ . ಆಗ ಹಸಾದವೆಂದು ಕಾವ್ಯರಚನೆಗೆ ತೊಡಗಿ ತಿಮ್ಮಣ್ಣ ತನ್ನ ಭಾರತವನ್ನು ಬರೆದು ಶ್ರೀ ಕೃಷ್ಣದೇವರಾಯನಿಗೆ ಅಂಕಿತ ಮಾಡಿದನಂತೆ. 

	ಪ್ರತಿಪರ್ವದ ಅಂತ್ಯದಲ್ಲೂ `ಇತಿ ಶ್ರೀಮದಚಿಂತ್ಯಮಹಿಮವೇಂಕಟಪತಿ ಚರಣಾರವಿಂದಮಕರಂದಮಧುಪಾನಪುಷ್ಟವಚಷಟ್ಪದೀನಿಕಾಯ ಶ್ರೀ ಮತ್ಕರ್ಣಾಟ ಕವಿಕುಲಸಾರ್ವಭೌಮ ತಿಮ್ಮಣ್ಣ ಕವೀಂದ್ರವಿರಚಿತಮಪ್ಪ ಕರ್ಣಾಟಕ ಕೃಷ್ಣರಾಯ ಭಾರತಕಥಾಮಂಜರಿಯೊಳ್ ' ಎಂದಿದೆ. 

	ಕವಿಗೆ ಕುಮಾರವ್ಯಾಸನ ಸ್ಫೂರ್ತಿ, ಕೃಷ್ಣದೇವರಾಯನ ಪ್ರೋತ್ಸಾಹಗಳು ಕಾವ್ಯರಚನೆಗೆ ಪ್ರಚೋದನೆ ನೀಡಿವೆ. ಅಂತೆಯೇ ತೆಲುಗಿನ ಕವಿಬ್ರಹ್ಮ ತಿಕ್ಕನನ ಪ್ರಭಾವವೂ ಈತನ ಮೇಲೆ ಸಾಕಷ್ಟಾಗಿದೆ. ಸಂಸ್ಕøತ ಮತ್ತು ತೆಲುಗು ಕೃತಿಗಳಿಂದ ಹಲವು ಭಾಗಗಳು ನೇರವಾಗಿ ಭಾಷಾಂತರವಾಗಿರುವುದೂ ಉಂಟು. 

	ಕುಮಾರವ್ಯಾಸನ ಅಪೂರ್ಣ ರಚನೆಯಾದ ಕನ್ನಡ ಮಹಾಭಾರತವನ್ನು ಪೂರ್ಣಗೊಳಿಸಿದ ಪುಣ್ಯ ತಿಮ್ಮಣ್ಣ ಕವಿಯದು. ಕುಮಾರವ್ಯಾಸನ ಪ್ರತಿಭೆ, ಪ್ರೌಢಿಮೆ, ಕೆಚ್ಚು ಯಾವುದೂ ಈ ಕೃತಿಯಲ್ಲಿ ಆ ಮಟ್ಟದಲ್ಲಿ ಸಿಗುವುದಿಲ್ಲ. ಕುಮಾರವ್ಯಾಸನಂತೆ ಈತ ಭಾಗವತ ಪಂಥದ ಭಕ್ತ ಕವಿ; ಆತನಿಗೆ ಗದುಗಿನ ವೀರನಾರಾಯಣನಾದರೆ, ಈತನಿಗೆ ಶ್ರೀ ವೇಂಕಟೇಶ ಇಷ್ಟದೈವ. ಆದರೂ ಆತನ ಭಕ್ತಿಯ ಆವೇಶ ಈತನಲ್ಲಿಲ್ಲ. ಅದಕ್ಕೆ ಬದಲು ಅನ್ನದಾತನ ಹೊಗಳಿಗೆ ತುಂಬಿದೆ. ಪ್ರತಿ ಸಂಧಿಯ ಅಂತ್ಯದಲ್ಲೂ ಶ್ರೀ ವೇಂಕಟಪತಿಯೊಡನೆ ಕೃಷ್ಣದೇವರಾಯನನ್ನೂ ಸ್ಮರಿಸುವ ಗೀಳು ಬಹಳವಿದೆ. ಒಟ್ಟಿನಲ್ಲಿ ತಿಮ್ಮಣ್ಣನ ಭಾರತ ಬಹು ಸಾಧಾರಣ ಕೃತಿ. 						(ಎಸ್.ಎಸ್.ಎಂ.ಎ.;ಎಂ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ